ರುದ್ರಪ್ಪ, ಹಂಜಿ
1911-80. ಕರ್ನಾಟಕದ ರುದ್ರ ಹಂಜಿ ಎಂದೇ ಖ್ಯಾತರಾಗಿದ್ದ ಕಲಾವಿದ, ಶಿಲ್ಪಿ. ತಮ್ಮ ಸೃಜನಶೀಲ ಕೃತಿಗಳಿಗೆ ಹೆಸರಾದ ಇವರು ಮಧ್ಯಪ್ರದೇಶದ ಸರ್ಕಾರ ಹಾಗೂ ಗ್ವಾಲಿಯರ್ ರಾಜ ಮನೆತನದವರ ಪ್ರೋತ್ಸಾಹದಿಂದ ಮುಂದೆ ಬಂದರು. ಹುಟ್ಟಿದ್ದು ತರೀಕೆರೆಯಲ್ಲಿ. ತಂದೆ ಶಂಕರಪ್ಪ, ಹಂಜಿ. ಇವರ ಪ್ರಾಥಮಿಕ ವಿದ್ಯಾಭ್ಯಾಸ ತರೀಕೆರೆಯಲ್ಲಿ. ಅನಂತರ ಮೈಸೂರಿನಲ್ಲಿ ವ್ಯಾಸಂಗ ಮುಂದುವರಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಟರ್ ಮಿಡಿಯೇಟ್ ಶಿಕ್ಷಣ ಮುಗಿಸಿದರು. ಕವಿ ಮನೋಭಾವದ ಗಂಭೀರ ಪ್ರವೃತ್ತಿಯ ಇವರು ಚಿಕ್ಕಂದಿನಿಂದಲೂ ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡುವುದು ಹಾಗೂ ಚಿತ್ರ ಬರೆಯುವುದನ್ನು ರೂಢಿಸಿ ಕೊಂಡು ಬಂದರು. ಜೊತೆಗೆ ಕವನಗಳನ್ನೂ ರಚಿಸತೊಡಗಿದರು. ಆಗಿನ ಮೈಸೂರು ಮಹಾರಾಜರ ಕೃಪೆಯಿಂದ (1927) ಶಾಂತಿನಿಕೇತನಕ್ಕೆ ಹೋದರು. 

ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರ್ ಹಾಗೂ ಅವನೀಂದ್ರ ನಾಥ ಠಾಕೂರ್ ಮೊದಲಾದವರಿಂದ ಪ್ರಭಾವಿತರಾಗಿ ನಂದಲಾಲ್ ಬೋಸ್ ಹಾಗೂ ರಾಮಕಿಂಕರ ಅವರಲ್ಲಿ ಶಿಷ್ಯವೃತ್ತಿ ಆರಂಭಿಸಿದರು. ಮಹಾರಾಜರ ವಿದ್ಯಾರ್ಥಿವೇತನದ ಕಾಲಾವಧಿ ಮುಗಿದರೂ 1936ರ ವರೆಗೆ ಶಾಂತಿನಿಕೇತನದಲ್ಲಿದ್ದರು. ಅನಂತರ 1944ರ ತನಕ ಬನಾರಸ್ ವಸಂತ ಮಹಲ್ ವಿದ್ಯಾಲಯದಲ್ಲಿ ಕಲಾಶಿಕ್ಷಕರಾಗಿ, ಗ್ವಾಲಿಯರ್ ಪದ್ಮ ವಿದ್ಯಾಲಯದಲ್ಲಿ ಕಲಾ ಆಚಾರ್ಯರಾಗಿ ಸೇವೆ ಸಲ್ಲಿಸಿದರು. 1972ರಲ್ಲಿ ರಾಜಮಾತೆ ವಿಜಯರಾಜೆ ಸಿಂಧ್ಯ ಅವರ ಅಪೇಕ್ಷೆ ಮೇರೆಗೆ ಗ್ವಾಲಿಯರ್‍ನ ಸಿಂಧಿಯಾ ಕನ್ಯಾ ವಿದ್ಯಾಲಯದಲ್ಲಿ ಹಿರಿಯ ಕಲಾಶಿಕ್ಷಕ ರಾಗಿ ದುಡಿದರು. 1976ರಲ್ಲಿ ಸೇವೆಯಿಂದ ನಿವೃತ್ತರಾದರು. ಅಲ್ಲಿಯೇ ಮತ್ತೆ ಮೂರು ವರ್ಷಗಳ ಕಾಲ ಮುಂದುವರಿದರು. 1979ರಲ್ಲಿ ಕೇಂದ್ರ ಸರ್ಕಾರ ಮೂರು ವರ್ಷಗಳ ವರೆಗೆ ಮೂರ್ತಿ ರಚನೆಗಾಗಿ ಫೆಲೋಶಿಪ್ ನೀಡಿ ಗೌರವಿಸಿತು. ಆದರೆ 1980 ಫೆಬ್ರುವರಿ 8ರಂದು ನಿಧನರಾದರು.

1940ರಲ್ಲಿ ಮಾಡ್ರನ್ ರಿವ್ಯೂ ಹಾಗೂ ಸ್ಟುಡಿಯೋ ಆಫ್ ಲಂಡನ್ ಪತ್ರಿಕೆಗಳು ಇವರ ಕಲಾಪ್ರತಿಭೆಯನ್ನು ಗುರುತಿಸಿ ಮೆಚ್ಚುಗೆ ಸೂಸಿದವು. 1943ರಲ್ಲಿ ದೆಹಲಿಯ ಏಷ್ಯ ಕಲಾಪ್ರದರ್ಶನದಲ್ಲಿ, 1949ರಲ್ಲಿ ಏಷ್ಯ ಆಟ್ರ್ಸ್ ಪ್ರದರ್ಶನದಲ್ಲಿ, 1958ರಲ್ಲಿ ಉಜ್ಜಯಿನಿ ಅಖಿಲ ಭಾರತೀಯ ಕಾಳಿದಾಸ ಚಿತ್ರ ಮತ್ತು ಮೂರ್ತಿ ಕಲಾಪ್ರದರ್ಶನಗಳಲ್ಲಿ ಇವರನ್ನು ಪುರಸ್ಕರಿಸಲಾಯಿತು. 1954ರಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಮಂಡಲದ ಸದಸ್ಯರಾಗಿ ಚೀನ ಹಾಗೂ 1964ರಲ್ಲಿ ನೇಪಾಲಕ್ಕೆ ಹೋಗಿ ಬಂದರು. 1975ರಲ್ಲಿ ಮಧ್ಯಪ್ರದೇಶ ಕಲಾಪರಿಷತ್ ಇವರನ್ನು ಸನ್ಮಾನಿಸಿತು.
ಇವರ ಕಲಾಕೃತಿಗಳು ಶಾಂತಿನಿಕೇತನ, ಬನಾರಸ್, ವಸಂತ್ ಮಹಲ್ ವಿದ್ಯಾಲಯ, ಪಟಿಯಾಲ ಮಹಲ್, ಗ್ವಾಲಿಯರ್ ಪದ್ಮ ವಿದ್ಯಾಲಯ, ಸಿಂಧಿಯಾ ವಿದ್ಯಾಲಯಗಳಲ್ಲಿ ಇವೆ. ಇವರ ಜೀವನ ಹಾಗೂ ಕಲೆ ಕುರಿತಂತೆ ಮಧ್ಯಪ್ರದೇಶದ ಕಲಾಪರಿಷತ್ ಮಾನೋಗ್ರಾಫ್ ಹೊರ ತಂದಿದೆ. ಮಧ್ಯಪ್ರದೇಶ ಸರ್ಕಾರ ರುದ್ರ ಆರ್ಟ್ ಗ್ಯಾಲರಿ ಎಂಬ ಹೆಸರಿನಲ್ಲಿ ಇವರ ಎಲ್ಲ ಕಲಾಕೃತಿಗಳನ್ನು ಸಂಗ್ರಹಿಸಿದೆ.

ಸಿಮೆಂಟ್ ಹಾಗೂ ಪ್ಲಾಸ್ಟರ್‍ನಲ್ಲಿ ಮೂರ್ತಿಗಳನ್ನು, ಬಣ್ಣದ ರೇಖೆಯಲ್ಲಿ ಚಿತ್ರಗಳನ್ನು ಸೃಜಿಸಿರುವ ಇವರು ನಂದಲಾಲ್ ಬೋಸರ ಚಿತ್ರರಚನಾಶೈಲಿ, ರಾಮಕಿಂಕರರ ಮೂರ್ತಿರಚನಾ ಶೈಲಿಯನ್ನು ಅಳವಡಿಸಿ ಕೊಂಡು ತಮ್ಮದೇ ಆದ ವೈಶಿಷ್ಟ್ಯಪೂರ್ಣ ಶೈಲಿಯಲ್ಲಿ ಬೆಳಗಿದ್ದಾರೆ.

ಇವರು ರಚಿಸಿದ ಮೂರ್ತಿಶಿಲ್ಪಗಳಲ್ಲಿ ಗ್ವಾಲಿಯರ್‍ನ ಪದ್ಮ ವಿದ್ಯಾಲಯದ ಅಂಗಳದಲ್ಲಿರುವ ಸರಸ್ವತಿ ವಿಗ್ರಹ, ಆರು ದಂತಗಳ ಆನೆ, ಬಾರಾದಾರಿ ಹೊದೋಟದಲ್ಲಿರುವ ಪಾವನ ಪರಿವಾರ, ತೀನ್ ಕನ್ಯಾ, ಭಗವಾನ್ ಬುದ್ಧ, ನಟರಾಜ, ಕುಲು ಶ್ರಮಿಕರು-ಮುಂತಾದವು ಇವರ ಕಲಾಪ್ರೌಢಿಮೆಯ ದ್ಯೋತಕಗಳಾಗಿವೆ.

ಜೇಲಮನ ಗೀತೆ ಎಂಬ ಚಿತ್ರ ಇವರ ವರ್ಣಚಿತ್ರಗಳಲ್ಲಿ ಶ್ರೇಷ್ಠ ಮಟ್ಟದ್ದು. ಕಾಶ್ಮೀರದ ಇತಿಹಾಸ, ಜನಜೀವನ, ಋತುಮಾನವನ್ನು ಗಮನಿಸಿ ರೇಷ್ಮೆ ವಸ್ತ್ರದ ಮೇಲೆ 15 ಅಡಿ ಉದ್ದ 1 ಅಡಿ ಅಗಲದಲ್ಲಿ ರಚಿತವಾದ (1960) ಈ ಚಿತ್ರ ಗ್ವಾಲಿಯರ್‍ನ ಸ್ವಂತ ಸಂಗ್ರಹಾಲ ಯದಲ್ಲಿದೆ.

24 ಅಡಿ ಎತ್ತರದ ಸರಸ್ವತಿ ವಿಗ್ರಹ ಒಂದು ಭವ್ಯ ಮೂರ್ತಿ. ಇದೊಂದು ಶ್ರೇಷ್ಠ ಕಲಾಕೃತಿಯಾಗಿದೆ. ಪದ್ಮ ವಿದ್ಯಾಲಯದ ಅಂಗಳ ದಲ್ಲಿರುವ ಆರು ದಂತಗಳ ಆನೆಯ ಕಲಾಕೃತಿ ಸಿಮೆಂಟ್ ಕಾಂಕ್ರೀಟಿನಿಂದ ಮಾಡಿದ 14ಘಿ16 ಅಡಿಗಳ ಬೃಹತ್ ರಚನೆ.  

	ಚೀನ ಹಾಗೂ ಜಪಾನ್ ದೇಶಗಳ ಕಲೆ, ಸಂಸ್ಕøತಿ, ಜನಜೀವನ ಅರಿತಿದ್ದ ಇವರು ತಮ್ಮ ಮೂರ್ತಿಶಿಲ್ಪಗಳಲ್ಲಿ, ಚಿತ್ರಗಳಲ್ಲಿ ಅಲ್ಲಿನ ಕಲೆಯ ಅಂಶಗಳ ಮಿಶ್ರಣವನ್ನು ಮಾಡಿರುವುದನ್ನು ನಾವು ಕಾಣಬಹುದಾಗಿದೆ. 	
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ